ಗ್ರ್ಯಾಂಟ್ ಯುಲಿಸಿಸ್ ಸಿಂಪ್ಸನ್ -
	1822 - 1885. ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಬ್ಬ ಜನರಲ್ ಹಾಗೂ 18ನೆಯ ಅಧ್ಯಕ್ಷ. ಜನನ ಒಹಾಯೋದ ಪಾಯಿಂಟ್ ಪ್ಲೆಸೆಂಟಿನಲ್ಲಿ 1822ರ ಏಪ್ರಿಲ್ 27ರಂದು. ತಂದೆ ಜೆಸ್ಸಿ ಆರ್. ಗ್ರಾಂಟ್, ತಾಯಿ ಹ್ಯಾನ ಸಿಂಪ್ಸನ್. ಗ್ರ್ಯಾಂಟ್ ಇವರ ಹಿರಿಯ ಮಗ. ಚಿಕ್ಕಂದಿನಲ್ಲಿ ತಂದೆಗೆ ಆತನ ಹೊಲದ ಕೆಲಸದಲ್ಲಿ ನೆರವು ನೀಡುತ್ತಿದ್ದ. ಈತ 1839ರಲ್ಲಿ ವೆಸ್ಟ್ ಪಾಯಿಂಟಿನ ಮಿಲಿಟರಿ ಅಕಾಡೆಮಿ ಸೇರಿದ. ಇವನಿಗೆ ಪದವಿ ದೊರಕಿದ್ದು 1843ರಲ್ಲಿ. 1845ರಲ್ಲಿ ತನ್ನ ರೆಜಿಮೆಂಟಿನೊಂದಿಗೆ ಮೆಕ್ಸಿಕೋಗೆ ಹೋಗಿ ಅಲ್ಲಿಯ ಕದನಗಳಲ್ಲಿ ಪಾಲ್ಗೊಂಡ. 1847ರಲ್ಲಿ ಇವನಿಗೆ ಲೆಫ್ಟೆನಂಟ್ ಹುದ್ದೆ ದೊರಕಿತು. ಜೂಲಿಯ ಟಿ. ಡೆಂಟಳನ್ನು ಈತ ಮದುವೆಯಾದದದ್ದು 1848ರಲ್ಲಿ. 1853ರಲ್ಲಿ ಇವನು ಕ್ಯಾಪ್ಟನ್ ಆದ. ಆದರೆ ಅತಿಯಾಗಿ ಕುಡಿಯುವನೆಂಬ ಅಪಖ್ಯಾತಿಯಿಂದಾಗಿ ಮರುವರ್ಷ ತನ್ನ ಹುದ್ದೆಗೆ ಈತ ರಾಜೀನಾಮೆ ಕೊಡಬೇಕಾಯಿತು. ಮುಂದಿನ ಆರು ವರ್ಷಗಳಲ್ಲಿ ಈತ ತನ್ನ ಜಮೀನಿನ ಕೃಷಿ ಕಾರ್ಯ ನಡೆಸಿದ. 1860ರಲ್ಲಿ ಇಲಿನಾಯ್‍ನ ಗ್ಯಾಲಿನಕ್ಕೆ ಹೋಗಿ ತಂದೆಯ ಚರ್ಮದಂಗಡಿಯಲ್ಲಿ ಗುಮಸ್ತೆಯಾದ. ಆಗ ಇವನ ವರಮಾನ ಬಹಳ ಕಡಿಮೆಯಿತ್ತು. ಇವನ ಜೀವನ ವಿಫಲವೆಂದೇ ಭಾಸವಾಗುತ್ತಿತ್ತು.

	1861ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಆರಂಭವಾಯಿತು. ಈತ ಬಹಳ ಶ್ರಮಪಟ್ಟು ಹುದ್ದೆ ಗಳಿಸಿಕೊಂಡ. ಈತನ ದಕ್ಷತೆ ಸಾಮಥ್ರ್ಯಗಳನ್ನು ಮನಗಂಡ ಲಿಂಕನ್ ಈತನಿಗೆ ಬ್ರಿಗೇಡಿಯರ್ ಹುದ್ದೆಗೆ ಬಡತಿ ನೀಡಿದ. ಕ್ರಮಕ್ರಮವಾಗಿ ಉನ್ನತಿ ಹೊಂದಿದ. ಯುದ್ಧಕೌಶಲವೂ ಕರಗತವಾಯಿತು. ಯಾವುದೇ ಪಕ್ಷದ ರಾಜಕೀಯ ಸುಳಿಯಲ್ಲಿ ಸಿಕ್ಕಿಕೊಳ್ಳದೆ ನಿಷ್ಠಾವಂತ ಸೈನಿಕನಾಗಿದ್ದುಕೊಂಡು ಗ್ರ್ಯಾಂಟ್ ತೋರಿದ ಅಸಾಧಾರಣ ಧೈರ್ಯ, ಸಾಹಸ, ನಿಷ್ಠೆ, ನಿರ್ಧಾರ ಇವು ಈತನ ಪ್ರತಿಷ್ಠೆಯನ್ನು ಹೆಚ್ಚಿಸಿದವು. ಲಿಂಕನ್ ಇವನನ್ನು ಮೆಚ್ಚಿಕೊಂಡಿದ್ದ. ಲಿಂಕನನ ಕೊಲೆಯಾದ ಮೇಲೆ ಅಧ್ಯಕ್ಷನಾದ ಆಂಡ್ರ್ಯಾ ಜಾನ್ಸನನೂ ಗ್ರ್ಯಾಂಟನೂ ಪರಸ್ಪರ ಸೌಹಾರ್ದದಿಂದಿದ್ದರು. ಆದರೆ ಕ್ರಮೇಣ ಇವರಲ್ಲಿ ವಿರಸ ಬೆಳೆಯಿತು. ಅನೇಕ ಮಂದಿ ರಿಪಬ್ಲಿಕನರು ಗ್ರ್ಯಾಂಟನನ್ನು ಅಧ್ಯಕ್ಷತೆಗೆ ನಿಲ್ಲಿಸಿದರು. ಚುನಾವಣೆಯಲ್ಲಿ ಗ್ರ್ಯಾಂಟ್ ಜಯಗಳಿಸಿದ. 1869ರಲ್ಲಿ ಈತ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಾದ. ಆರಂಭದಲ್ಲಿ ರಾಜಕೀಯವಾಗಿ ಗ್ರ್ಯಾಂಟ್ ಅನೇಕ ತಪ್ಪುಗಳನ್ನು ಮಾಡಿದ. ಹಲವು ಸ್ಥಾನಗಳಿಗೆ ಸಚಿವರನ್ನು ನೇಮಿಸುವ ವಿಚಾರದಲ್ಲಿ ಇವನಿಗೂ ಪಕ್ಷದ ನಾಯಕರಿಗೂ ಘರ್ಷಣೆ ಉಂಟಾಯಿತು. ಜೇ ಗೌಲ್ಡ್ ಮತ್ತು ಜೇಮ್ಸ್ ಫಿಸ್ಕ್ ಎಂಬಿಬ್ಬರು ನ್ಯೂಯಾರ್ಕ್ ಚಿನ್ನದ ಪೇಟೆಯಲ್ಲಿ ನಡೆಸಲು ಯತ್ನಿಸಿದರೆನ್ನಲಾದ ದುವ್ರ್ಯವಹಾರಗಳಲ್ಲಿ ಗ್ರ್ಯಾಂಟನೂ ಸೇರಿದ್ದನೆಂಬ ಆಪಾದನೆಗೆ ಒಳಗಾದ. ಗ್ರ್ಯಾಂಟನ ಭಾವ ಮೈದುನನಿಗೂ ಇವಕ್ಕೆ ಸಂಬಂಧವಿತ್ತೆಂಬುದಂತೂ ವ್ಯಕ್ತಪಟ್ಟಿತು.

	1872ರಲ್ಲಿ ಮತ್ತೆ ಅಧ್ಯಕ್ಷತೆಗೆ ಗ್ರ್ಯಾಂಟ್ ಸ್ಪರ್ಧಿಸಿದ. ಡೆಮೊಕ್ರಾಟರು ಸೂಕ್ತ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯಾಗಿ ಆರಿಸಲಿಲ್ಲವಾದ್ದರಿಂದ ಗ್ರ್ಯಾಂಟ್ ಸುಲಭವಾಗಿ ವಿಜಯ ಗಳಿಸಿದ.

	1873ರಲ್ಲಿ ಗ್ರ್ಯಾಂಟಿನ ಅಧ್ಯಕ್ಷತೆಯ ಎರಡನೆಯ ಅವಧಿ ಆರಂಭವಾಯಿತು. ಆ ಕಾಲದಲ್ಲಿ ಹಲವಾರು ಭ್ರಷ್ಟಾಚಾರಗಳ ಬಗ್ಗೆ ನಾನಾ ಬಗೆಯ ವದಂತಿಗಳು ಹಬ್ಬಿದವು. ಕಾಂಗ್ರೆಸಿಗರು ಮತ್ತು ಸಚಿವರ ಲಂಚಕೋರತನಗಳು ಬಯಲಿಗೆ ಬಂದವು. ಕಾಂಗ್ರೆಸಿಗರು ತಮ್ಮ ಸಂಬಳ ಹೆಚ್ಚಿಸಿಕೊಂಡಿದ್ದನ್ನು ಸಂಬಳ ಬಡಕತನವೆಂದು ಪತ್ರಿಕೆಗಳು ಟೀಕಿಸಿದವು. ಅಧ್ಯಕ್ಷನ ಆಪ್ತಕಾರ್ಯದರ್ಶಿಯೇ ಮೋಸ ವ್ಯವಹಾರವೊಂದರಲ್ಲಿ ಸಿಕ್ಕಿ ಬಿದ್ದಿದ್ದ. ಚುನಾವಣೆಯ ಕಾಲದಲ್ಲಿ ನಡೆಯಿತೆನ್ನಲಾದ ಅಕ್ರಮಗಳು ಬಯಲಾದವು. ಈತನ ಅಧಿಕಾರಾವಧಿಯಲ್ಲಾದ ಒಂದು ಮುಖ್ಯ ಸಾಧನೆಯೆಂದರೆ ದಕ್ಷಿಣದ ರಾಜ್ಯಗಳ ಪುನರ್ರಚನೆ. ಅಲ್ಲಿಯ ಸರ್ಕಾರಗಳ ವರ್ಣಭೇದ ನೀತಿಯ ತೀವ್ರತೆ ಕಡಿಮೆಯಾಯಿತು. ವರ್ಣೀಯರಿಗೆ ಮತಹಕ್ಕು ನೀಡಬಾರದೆಂಬ ದೃಷ್ಟಿ ಕ್ರಮೇಣ ಕಡಿಮೆಯಾಯಿತು. ಅಂತರ್ಯುದ್ಧಕಾಲದಲ್ಲಿ ಒಕ್ಕೂಟ ಸರ್ಕಾರದ ವಿರುದ್ಧವಾಗಿದ್ದವರಿಗಾಗಿ ಡಿಸ್ಟ್ರಾಯರ್ ನೌಕೆಗಳನ್ನು ನಿರ್ಮಿಸಿಕೊಟ್ಟಿದ್ದ ಬ್ರಿಟಿಷ್ ಸರ್ಕಾರ ಅಮೆರಿಕಕ್ಕೆ ಪರಿಹಾರ ನೀಡಬೇಕೆಂಬ ಪ್ರಶ್ನೆಯನ್ನು ಪಂಚಾಯತಿ ನ್ಯಾಯಾಲಯಕ್ಕೆ ಒಪ್ಪುವ ವಾಷಿಂಗ್ಟನ್ ಕೌಲು (1871) ಆದ್ದು ಗ್ರ್ಯಾಂಟನ ಅಧ್ಯಕ್ಷತೆಯ ಕಾಲದಲ್ಲಿ.

	1877ರಲ್ಲಿ ಗ್ರ್ಯಾಂಟನ ಅಧ್ಯಕ್ಷಾಧಿಕಾರಾವಧಿ ಮುಗಿಯಿತು. ಗ್ರ್ಯಾಂಟ್ ಲೋಕ ಪರ್ಯಟನ ಮಾಡಿದ. ಆ ಸಮಯದಲ್ಲಿ ಭಾರತ, ಚೀನ, ಜಪಾನಗಳಿಗೂ ಭೇಟಿ ನೀಡಿದ. 1880ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಇವನ ಪಕ್ಷದ ಕೆಲವು ಇವನನ್ನು ಮತ್ತೊಮ್ಮೆ ಅಧ್ಯಕ್ಷತೆಗೆ ಬರುವುದಕ್ಕೆ ವಿರೋಧವಿತ್ತಾದರಿಂದ ಇವನು ಬರಲಿಲ್ಲ. ಈತ ನ್ಯೂಯಾರ್ಕಿನಲ್ಲಿ ನೆಲೆಸಿದ. ಬ್ಯಾಂಕಿಂಗ್ ವ್ಯವಹಾರದಲ್ಲಿ ತನ್ನೆಲ್ಲ ಐಶ್ವರ್ಯವನ್ನೂ ತೊಡಗಿಸಿದ. ಈತ ಪಾಲುದಾರನಾಗಿದ್ದ ಬ್ಯಾಂಕು ಮುಳುಗಿ ಹೋಯಿತು. ಇವನ ಪಾಲುದಾರರು ಇವನಿಗೆ ಮೋಸ ಮಾಡಿದ್ದರು. ಗ್ರ್ಯಾಂಟ್ ಕೊನೆಗಾಲದಲ್ಲಿ ಬಹಳ ಕಷ್ಟಪಡಬೇಕಾಯಿತು. ಕಾಯಿಲೆಯಿಂದ ನರಳುತ್ತಿದ್ದಾಗಲು ತನ್ನ ಅಭಿಮಾನವನ್ನು ಕಳೆದುಕೊಳ್ಳಲಿಲ್ಲ. ಪತ್ರಿಕೆಯೊಂದರ ಬೇಡಿಕೆಯಂತೆ ಅದರಲ್ಲಿ ಪ್ರಕಟಣೆಗಾಗಿ ತನ್ನ ಜೀವನದ ನೆನಪುಗಳನ್ನು ಕುರಿತು ಲೇಖನಗಳನ್ನು ಬರೆದ. ಇದರಿಂದ 5,00,000 ಡಾಲರುಗಳ ಸಂಪಾದನೆಯಾಯಿತು. ಸಾಯುವುದಕ್ಕೆ ನಾಲ್ಕು ದಿನಗಳ ಮುಂಚೆ ತಾನೇ ಅದು ಮುಗಿಯಿತು. 1885ರ ಜುಲೈ 23ರಂದು ಗ್ರ್ಯಾಂಟ್ ತೀರಿಕೊಂಡ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ